ಜ್ಯೋತಿರ್ಲಿಂಗ -
	ಈಶ್ವರನ ವಿಶ್ವವ್ಯಾಪಕತೆಯನ್ನೂ ತಮೋಹರ ಗುಣವನ್ನೂ ಸೂಚಿಸುವ ಒಂದು ಮಾತು. ಬ್ರಹ್ಮ ವಿಷ್ಣುಗಳ ಮಧ್ಯೆ ಶಿವಜ್ಯೋತಿರ್ಲಿಂಗವಾಗಿ ಮೂಡಿನಿಂತಾಗ ಹೇತೆ ಅವರು ಅವನ ಪಾದವನ್ನಾಗಲಿ ಶಿರವನ್ನಾಗಲಿ ಕಾಣಲಾಗಲಿಲ್ಲ ಎಂಬುದನ್ನು ಪುರಾಣದ ಕಥೆಯೊಂದು ವರ್ಣಿಸುತ್ತದೆ. ಶಿವ ಜ್ಯೋತಿಯಂತೆ ಸರ್ವವ್ಯಾಪಕ, ಬೆಳಕು ಕೊಡುವವನು, ಭಕ್ತರ ಮನದ ಕತ್ತಲೆಯನ್ನು ತನ್ನ ಬೆಳಕಿನಿಂದ ಕಳೆಯುವವನು. ಈ ಅರ್ಥವೆಲ್ಲ ಜ್ಯೋತಿರ್ಲಿಂಗದ ಕಲ್ಪನೆಯಲ್ಲಿ ಅಡಗಿದೆ.

	ಭಾರತದಲ್ಲಿ ಪ್ರಸಿದ್ಧವೆನಿಸಿರುವ ದ್ವಾದಶ ಜ್ಯೋತಿರ್ಲಿಂಗಗಳು ಹೀಗಿವೆ: ಸೌರಾಷ್ಟ್ರದ ಸೋಮನಾಥ, ಶ್ರೀಶೈಲದ ಮಲ್ಲಿಕಾರ್ಜುನ, ಉಜ್ಜಯಿನಿಯ ಮಹಾಕಾಲ, ಓಂಕಾರ ಕ್ಷೇತ್ತದ ಅಮರೇಶ್ವರ, ಪರಲಿಯ ವೈಜನಾಥ ಅಥವಾ ವೈದ್ಯನಾಥ, ಡಾಕಿನಿಕ್ಷೇತ್ರದ ಭೀಮಶಂಕರ, ಸೇತುಬಂಧದ ರಾಮೇಶ್ವರ, ದಾರುಕವನದ ನಾಗೇಶ, ಕಾಶಿಯ ವಿಶ್ವೇಶ್ವರ, ಗೌತಮೀತಟದ ತ್ರ್ಯಂಬಕ, ಹಿಮವತ್ಕೇದಾರದ ಕೇದಾರೇಶ್ವರ, ಏಲಾಪುರಿಯ ಘಸೃಣೇಶ.

	ಶಿವಶರಣದ ಮಾತಿನ ಮಹಿಮೆಯನ್ನು ವರ್ಣಿಸುತ್ತ ಅಲ್ಲಮಪ್ರಭು 'ಮಾತೆಂಬುದು ಜ್ಯೋತಿರ್ಲಿಂಗ ಎಂದು ಅಂದಿರುವುದನ್ನು ಇಲ್ಲಿ ನೆನೆಯಬಹುದು.								  (ಎಸ್.ಟಿ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ